ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವುದಕ್ಕೆ ಯಾವುದೆಲ್ಲಾ ಅಕೌಂಟ್ ಬೇಕು?

ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಲು ನಮ್ಮ ಬಳಿ ಯಾವ ಯಾವ ಅಕೌಂಟ್ ಗಳು ಇರಬೇಕು ಮತ್ತು ಅವುಗಳ ಅಗತ್ಯತೆ ಏನು ಎಂದು ನೀವು ಈ ಪೋಸ್ಟ್ನಲ್ಲಿ ತಿಳಿಯುವಿರಿ

ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವುದಕ್ಕೆ ಯಾವುದೆಲ್ಲಾ ಅಕೌಂಟ್ ಬೇಕು?

ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಲು ಬೇಕಾಗುವ ಅಕೌಂಟ್ ಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ನಾವು ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದರ ಬಗ್ಗೆ ತಿಳಿದುಕೊಳ್ಳೋಣ.

ಭಾರತದಲ್ಲಿ ಎಲ್ಲಾ ಬ್ಯಾಂಕುಗಳು RBI ಅಧೀನದಲ್ಲಿ ಅದರ ಕಾನೂನಿನ ಅನ್ವಯ ಕೆಲಸ ಮಾಡುತ್ತವೆ. ಆದರೆ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ನಾವು RBI ನಲ್ಲಿ ನೇರವಾಗಿ ಖಾತೆ ತೆರೆಯಲು ಸಾಧ್ಯವಿಲ್ಲ.

ನಾವು ಯಾವ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ಇಚ್ಚಿಸುತ್ತೇವೆಯೋ ಆ ಬ್ಯಾಂಕಿನಲ್ಲಿಯೇ ಖಾತೆ ತೆರೆಯಬೇಕಾಗುತ್ತದೆ. ನಾವು ಬೇಕಾದರೆ ಒಂದಕ್ಕಿಂತ ಹೆಚ್ಚು ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹಾರ ಮಾಡಬಹುದು.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಬೇರೆ ಬೇರೆ ಬ್ಯಾಂಕುಗಳು ನಮಗೆ ಬೇರೆ ಬೇರೆ ರೀತಿಯಲ್ಲಿ ವಿವಿಧ ಸೇವೆ ನೀಡುತ್ತವೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ನಮ್ಮ ಬಳಿ ಒಂದು ಬ್ಯಾಂಕ್ ಅಕೌಂಟ್ ಇರಬೇಕಾಗುತ್ತದೆ ( ಇಂಟರ್ನೆಟ್ / ಮೊಬೈಲ್ ಬ್ಯಾಂಕಿಂಗ್, upi ಸೇವೆ ನೀಡುವ ಉಳಿತಾಯ ಬ್ಯಾಂಕ್ ಖಾತೆ ).

ನಂತರ ನಮ್ಮ ಬಳಿ ಪಾನ್ ಕಾರ್ಡ್ ಇರಬೇಕು. ನಮ್ಮ ವಿಳಾಸ ಖಚಿತ ಪಡಿಸಲು ಆಧಾರ್ ಕಾರ್ಡ್ ಅಥವಾ ಇನ್ಯಾವುದೇ ಅಡ್ರೆಸ್ ಪ್ರೂಫ್ ಡಾಕ್ಯುಮೆಂಟ್ ಬೇಕು. ಇದರ ಜೊತೆಗೆ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಇರಬೇಕಾತ್ತದೆ.

ಷೇರು ಮಾರುಕಟ್ಟೆ

ಮಾರುಕಟ್ಟೆ ಎನ್ನುವುದು ಯಾವುದೇ ವಸ್ತುಗಳನ್ನು ಮಾರಾಟ ಮತ್ತು ಖರೀದಿ ಮಾಡಲು ಇರುವ ಜಾಗವಾಗಿದೆ. ಷೇರು ಮಾರುಕಟ್ಟೆಯಲ್ಲಿ ನಾವು ವಿವಿಧ ಕಂಪನಿಗಳ ಷೇರುಗಳನ್ನು ಖರೀದಿ ಮತ್ತು ಮಾರಾಟ ಮಾಡಬಹುದು.

ಭಾರತದಲ್ಲಿ ಪ್ರಮುಖವಾಗಿ ೨ ಷೇರು ಮರುಕಟ್ಟೆಗಳಿವೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ( NSE ) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ( BSE ).

ಈ ಎರಡು ಸ್ಟಾಕ್ ಎಕ್ಸ್ಚೇಂಜ್ ಗಳ ಹೊರತಾಗಿ ಭಾರತದಲ್ಲಿ ಬೇರೆ ಸ್ಟಾಕ್ ಎಕ್ಸ್ಚೇಂಜ್ ಗಳೂ ಸಹ ಇವೆ. ಈ ಎಲ್ಲ ಸ್ಟಾಕ್ ಎಕ್ಸ್ಚೇಂಜ್ ಗಳು SEBI ( Securities and Exchange Board of India ) ಯ ಕಾನೂನಿನ ಅನ್ವಯ ಕೆಲಸ ಮಾಡುತ್ತವೆ.

ಸ್ಟಾಕ್ ಎಕ್ಸ್ಚೇಂಜ್ ನ ಕೆಲಸ ಏನೆಂದರೆ ಷೇರುಗಳನ್ನು ಕೊಳ್ಳುವವರ ಮತ್ತು ಮಾರುವವರ ಮಧ್ಯದಲ್ಲಿ ವ್ಯವಹಾರ ನಡೆಯಲು ಅನುಕೂಲ ಮಾಡಿ ಕೊಡುವುದಾಗಿದೆ.

ಟ್ರೇಡಿಂಗ್ ಖಾತೆ

ಷೇರು ಮಾರುಕಟ್ಟೆ ಯಲ್ಲಿ ವ್ಯವಹಾರ ಮಾಡಲು ನಾವು ನೇರವಾಗಿ SEBI ಅಥವಾ ಸ್ಟಾಕ್ ಎಕ್ಸ್ಚೇಂಜ್ ಗಳ ಬಳಿ ಹೋಗಲು ಸಾಧ್ಯವಿಲ್ಲ. ಅದಕ್ಕೆ ನಾವು ಹೋಗಬೇಕಾಗುವುದು ಸ್ಟಾಕ್ ಬ್ರೋಕರ್ ಗಳ ಬಳಿ. ಸ್ಟಾಕ್ ಬ್ರೋಕರ್ ಗಳು ಕಾರ್ಪೊರೇಟ್ ಘಟಕಗಳಾಗಿದ್ದು SEBI ಯ ನಿಯಮದಂತೆ ಕೆಲಸ ಮಾಡುತ್ತವೆ. ಸ್ಟಾಕ್ ಎಕ್ಸ್ಚೇಂಜ್ ಗಳಲ್ಲಿ ಸ್ಟಾಕ್ ಬ್ರೋಕರ್ ಗಳು ಟ್ರೇಡಿಂಗ್ ಮೆಂಬರ್ ಆಗಿ ನೋಂದಾಯಿಸಿಕೊಂಡಿರುತ್ತಾರೆ.

ಸ್ಟಾಕ್ ಬ್ರೋಕರ್ ಗಳಿಗೆ ಸ್ಟಾಕ್ ಎಕ್ಸ್ಚೇಂಜ್ ಗಳಲ್ಲಿ ನಮ್ಮಂತಹ ಸಾಮಾನ್ಯ ಹೂಡಿಕೆ ದಾರರ ಪರವಾಗಿ ಷೇರುಗಳನ್ನು ಖರೀದಿ ಮತ್ತು ಮಾರಾಟ ಮಾಡುವ ಅಧಿಕಾರವಿರುತ್ತದೆ. ಸ್ಟಾಕ್ ಬ್ರೋಕರ್ ಗಳು ಮಧ್ಯವರ್ತಿಯ ರೀತಿ ಕೆಲಸ ಮಾಡುತ್ತಾರೆ.

ಷೇರು ಮರುಕಟ್ಟೆಯಲ್ಲಿ ವ್ಯವಹಾರ ಮಾಡಲು ನಾವು ಮೊದಲು ಸ್ಟಾಕ್ ಬ್ರೋಕರ್ ಬಳಿ ಟ್ರೇಡಿಂಗ್ ಖಾತೆ ತೆರೆಯಬೇಕಾಗುತ್ತದೆ. ನಾವು ಟ್ರೇಡಿಂಗ್ ಖಾತೆ ತೆರೆದಾಗ ಸ್ಟಾಕ್ ಬ್ರೋಕರ್, ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ನಮ್ಮ ಮಾಹಿತಿ ನೋಂದಾವಣೆ ಮಾಡಿ ನಾವು ವ್ಯವಹಾರ ಮಾಡಲು ಅನುವು ಮಾಡಿಕೊಡುತ್ತಾರೆ.

ಟ್ರೇಡಿಂಗ್ ಖಾತೆ ತೆರೆದಾಗ ಸ್ಟಾಕ್ ಬ್ರೋಕರ್ ನಮಗೆ ಷೇರು ಗಳ ಚಾರ್ಟ್, ಮತ್ತು ಇತರ ಮಾಹಿತಿ ಸುಲಭವಾಗಿ ಸಿಗುವಂತೆ ವೆಬ್ interface ( ಮೊಬೈಲ್ app, ಡೆಸ್ಕ್ಟಾಪ್ ಅಪ್ಲಿಕೇಶನ್, ವೆಬ್ಸೈಟ್ ) ಒದಗಿಸಿ ಕೊಡುತ್ತಾರೆ.

ಇವುಗಳ ಮೂಲಕ ನಾವು ನಮ್ಮ ಸ್ಟಾಕ್ ಬ್ರೋಕರ್ ಗೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ನಮಗೆ ಬೇಕಾದ ಷೇರುಗಳನ್ನು ಖರೀದಿ ಅಥವಾ ಮಾರಾಟ ಮಾಡುವಂತೆ ನಿರ್ದೇಶನ ನೀಡಬಹುದು. ನಮ್ಮ ನಿರ್ದೇಶನದಂತೆ ಸ್ಟಾಕ್ ಬ್ರೋಕರ್ ಕೆಲಸ ಮಾಡುತ್ತಾರೆ ಮತ್ತು ಅವರ ಸೇವೆಗೆ ನಮ್ಮಿಂದ ಶುಲ್ಕವನ್ನ ಸಹ ತೆಗೆದು ಕೊಳ್ಳುತ್ತಾರೆ. ಇದಕ್ಕೆ ನಾವು ಬ್ರೋಕರೇಜ್ ಎಂದು ಹೇಳುತ್ತೇವೆ.

ಡಿಮ್ಯಾಟ್ ಖಾತೆ

ಈಗ ನಮಗೆ ಷೇರು ಮಾರುಕಟ್ಟೆಯಲ್ಲಿ ಷೇರುಗಳ ವ್ಯವಹಾರ ಮಾಡಲು ಏನು ಮಾಡಬೇಕು ಎಂದು ತಿಳಿಯಿತು. ಇದಾದ ನಂತರ ನಾವು ಖರೀದಿ ಮಾಡಿದ ಷೇರುಗಳ ಮಾಹಿತಿಯನ್ನು ಎಲ್ಲಿ ಶೇಖರಿಸಿ ಇಡುವುದು ಎನ್ನುವುದರ ಬಗ್ಗೆ ನೋಡೋಣ.

ನಾವು ಖರೀದಿ ಮಾಡಿದ ಷೇರುಗಳ ಮಾಹಿತಿಯನ್ನು ಶೇಖರಿಸಿ ಇಡಲು ನಮ್ಮ ಬಳಿ SEBI ಜೊತೆ ರಿಜಿಸ್ಟರ್ ಆಗಿರುವ Securities Depository ಬಳಿ ಖಾತೆ ಬೇಕಾಗುತ್ತದೆ. ಈ ರೀತಿಯ ಖಾತೆ ಗೆ ನಾವು ಡಿಮ್ಯಾಟ್ ಖಾತೆ ಎನ್ನುತ್ತೇವೆ.

ಈ Securities Depository ಕೆಲಸವೇನೆಂದರೆ ನಮ್ಮಂತಹ ಹೂಡಿಕೆದಾರರು ಖರೀದಿ ಮಾಡಿದ ಷೇರುಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಶೇಖರಿಸಿ ಇಡುವುದಾಗಿದೆ ಮತ್ತು ನಾವು ಷೇರುಗಳನ್ನು ಮಾರಾಟ ಮಾಡಿದಾಗ ಷೇರುಗಳನ್ನು ಮಾರಾಟ ಮಾಡಿದವರ ಡಿಮ್ಯಾಟ್ ಖಾತೆಯಿಂದ ಖರೀದಿಸಿದವರ ಡಿಮ್ಯಾಟ್ ಖಾತೆಗೆ ವರ್ಗಾಯಿಸುವುದಾಗಿದೆ.

ನಿಮ್ಮ ಬ್ಯಾಂಕ್ ಅಕೌಂಟ್ ಗೆ ನೀವು ಹಣ ಹಾಕಿದಾಗ ಅಥವಾ ತೆಗೆದಾಗ ಹೇಗೆ ನಿಮ್ಮ ಖಾತೆ ಯಲ್ಲಿ ಆ ಮಾಹಿತಿಯನ್ನು ಶೇಖರಿಸಿ ಇಡಲಾಗುತ್ತದೆಯೋ ಹಾಗೆ . ಆದರೆ ಇಲ್ಲಿ ಷೇರುಗಳ ಮಾಹಿತಿ ಶೇಖರಿಸಿ ಇಡಲಾಗುತ್ತದೆ.

ಭಾರತದಲ್ಲಿ NSDL ಮತ್ತು CDSL ಎನ್ನುವ ಎರಡು Securities Depository ಸಂಸ್ಥೆ ಗಳಿವೆ. ಈ ಸಂಸ್ಥೆ ಗಳೂ ಸಹ SEBI ಯ ನಿಯಮದಂತೆ ಕೆಲಸ ಮಾಡುತ್ತವೆ.

Depository ಬಳಿ ನಾವು ನೇರವಾಗಿ ಹೋಗಿ ಖಾತೆ ತೆರೆಯಲು ಸಾಧ್ಯವಿಲ್ಲ. ಇದಕ್ಕಾಗಿ Depository Participants ಇರುತ್ತಾರೆ. ಇವರು ನಮಗೆ Securities Depository ಬಳಿ ಅಕೌಂಟ್ ಮಾಡಲು ಸಹಾಯ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲ ಸ್ಟಾಕ್ ಬ್ರೋಕರ್ ಗಳು Depository Participant ಆಗಿ ಸಹ ಕೆಲಸಮಾಡುತ್ತಾರೆ.

ಕೆಲವು ಬ್ಯಾಂಕು ಗಳು ಸಹ ಸ್ಟಾಕ್ ಬ್ರೋಕರ್ ಮತ್ತು Depository Participant ಸೇವೆ ನೀಡುತ್ತವೆ.

ನಾವು ಬೇರೆ ಬೇರೆ ಸ್ಟಾಕ್ ಬ್ರೋಕರ್ ಬಳಿ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆ ತೆರೆಯಬಹುದು. ಆದರೆ ಒಬ್ಬ ಸ್ಟಾಕ್ ಬ್ರೋಕರ್ ಜೊತೆ ಕೇವಲ ಒಂದು ಟ್ರೇಡಿಂಗ್ ಅಕೌಂಟ್ ಮತ್ತು ಡಿಮ್ಯಾಟ್ ಖಾತೆ ಮಾತ್ರ ತೆರೆಯಬಹುದಾಗಿದೆ.

ನಿಮ್ಮ ಬಳಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಇಲ್ಲದೆ ಇದ್ದರೆ ಇಲ್ಲಿ ಕೆಳಗೆ ನೀಡಿರುವ ಲಿಂಕ್ ಬಳಸಿ ಸುಲಭವಾಗಿ ಖಾತೆ ತೆರೆಯಿರಿ.

Zerodha : ಓಪನ್ ಅಕೌಂಟ್